ವಿದ್ಯಾರ್ಥಿಗಳು ತಮ್ಮ ಕ್ಯಾಮೆರಾಗಳನ್ನು ಆನ್ ಮಾಡಿ ಇಡಲು ಪ್ರೋತ್ಸಾಹಿಸುವ ತಂತ್ರಗಳು

ಕಳೆದ ಎರಡು ವರ್ಷಗಳು ಕಲಿಕೆಯ ಎಲ್ಲಾ ಸಾಂಪ್ರದಾಯಿಕ ರೂಢಿಗಳನ್ನು ಮರುವ್ಯಾಖ್ಯಾನಿಸಿದೆ. ಆನ್ ಲೈನ್ ತರಗತಿಗಳೊಂದಿಗೆ, ದಿನದ ಹೆಚ್ಚಿನ ಸಮಯದಲ್ಲಿ ಮಕ್ಕಳು ತಮ್ಮ ಲ್ಯಾಪ್ ಟಾಪ್ ಗಳಿಗೆ ಅಂಟಿಕೊಂಡಿರುವುದರಿಂದ ಆಯಾಸಗೊಳ್ಳುವುದು ತುಂಬಾ ಸಾಮಾನ್ಯವಾಗಿದೆ. ಇದರ ಜೊತೆಗೆ ಅವರು ತಮ್ಮ ಸಹಪಾಠಿಗಳೊಂದಿಗೆ ವಿನೋದದಿಂದಿರುವ ಅವಕಾಶವನ್ನು ಕಳೆದುಕೊಂಡಿರುವುದು ಸಹಾ ಅವರಿಗೆ ಬೇಸರದ ಸಂಗತಿಯಾಗಿರುತ್ತದೆ . ಇದನ್ನು ಎದುರಿಸಲು, ಶಿಕ್ಷಕರು ಆನ್ ಲೈನ್ ತರಗತಿಗಳನ್ನು ವಿನೋದವಾಗಿಸಲು ಸಾಮಾಜಿಕ-ಭಾವನಾತ್ಮಕ ಕಲಿಕೆಯ ವಿಧಾನಗಳನ್ನು ಬಳಸಬಹುದು ಮತ್ತು ಅವರ ಕ್ಯಾಮರಾಗಳನ್ನು ಆನ್ ಮಾಡಿ ಇಡಲು ಮತ್ತು ಕೆಳಗಿನವುಗಳನ್ನು ಅಭ್ಯಾಸ ಮಾಡಲು ಪ್ರೋತ್ಸಾಹಿಸುವ ಮೂಲಕ ಅವರಲ್ಲಿ ಸಮುದಾಯದ ಪ್ರಜ್ಞೆಯನ್ನು ಮತ್ತೆ ನೆಲೆಗೊಳಿಸಬಹುದು:

ಪಾತ್ರಾಭಿನಯವನ್ನು ಅಭ್ಯಾಸ ಮಾಡಿ: ಸಾಹಿತ್ಯ ತರಗತಿಗಳಲ್ಲಿ ಪಾತ್ರಾಭಿನಯವು ಮಕ್ಕಳಲ್ಲಿ ಹುರುಪನ್ನು ಹೆಚ್ಚಿಸಲು ಒಂದು ಉತ್ತಮ ಮಾರ್ಗವಾಗಿದೆ. ನೀವು ನಾಟಕ ಅಥವಾ ಪಾಠವನ್ನು ಓದುತ್ತಿರುವಾಗ ವಿದ್ಯಾರ್ಥಿಗಳಿಗೆ ಪಾತ್ರಗಳನ್ನು ನಿಯೋಜಿಸಬಹುದು ಮತ್ತು ಅದನ್ನು ಅಭಿನಯಿಸಿ ತೋರಿಸುವಂತೆ ಹೇಳಬಹುದು.

ಸ್ಟೋರಿಟೈಮ್ ಗಳನ್ನು ಬಳಸಿ: ತರಗತಿಗಳ ಮುಕ್ತಾಯದ ಸಮಯವನ್ನು ಸ್ಟೋರಿಟೈಮ್ ಗಳಿಗಾಗಿ ಕಾಯ್ದಿರಿಸುವ ಮೂಲಕ ವಿರಮಿಸುವಂತೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ. ಕೊನೆಯಲ್ಲಿ ನೀತಿಪಾಠವಿರುವ ಒಂದು ಮೋಜಿನ ಕಥೆಯು ನಿಮ್ಮ ಕಿರಿಯ ವಿದ್ಯಾರ್ಥಿಗಳ ದಿನವನ್ನು ಉಲ್ಲಾಸಮಯವಾಗಿಸಬಹುದು. ಪ್ರತಿ ತರಗತಿಯ ಕೊನೆಯಲ್ಲಿ ತಮ್ಮ ಕ್ಯಾಮೆರಾಗಳನ್ನು ಆನ್ ಮಾಡಲು ಮತ್ತು ಒಂದು ಕಥೆಯನ್ನು ಹೇಳಲು ವಿದ್ಯಾರ್ಥಿಗಳಿಗೆ ಹೇಳಿ. ಇದು ಕಾಲಾನಂತರದಲ್ಲಿ ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಎಲ್ಲರೆದುರು ಮಾತನಾಡುವ ಅವರ ಕೌಶಲ್ಯವನ್ನು ಸುಧಾರಿಸುತ್ತದೆ.

ಸೃಜನಾತ್ಮಕ ಪ್ರಸ್ತುತಿಗಳು: ಶಾಲಾ ಕೆಲಸಗಳನ್ನು ಹೊರತುಪಡಿಸಿ ಇತರ ವಿಷಯಗಳ ಪ್ರಸ್ತುತಿಗಳು ಪರಸ್ಪರ ಸಂವಹನ ನಡೆಸಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತವೆ. ಅವರಲ್ಲಿ ಪುನಃ ತರಗತಿಗೆ ಮರಳಿದಂತಹ ಭಾವನೆಯನ್ನು ಉಂಟುಮಾಡಲು ಒಟ್ಟಾಗಿ ಕೆಲಸ ಮಾಡುವಂತಹ ಗುಂಪು ಯೋಜನೆಗಳನ್ನು ಸಹ ಅವರು ಪ್ರಸ್ತುತಪಡಿಸಬಹುದು.

ಸಂವಹನ ನಡೆಸಲು ನೀವು ವಿದ್ಯಾರ್ಥಿಗಳಿಗೆ ಅವಕಾಶ ನೀಡಬಹುದು, ಪರಸ್ಪರರ ಪ್ರಗತಿಯನ್ನು ಟಿಪ್ಪಣಿ ಮಾಡಲು ಮತ್ತು ಸಹಕಾರಿ ಕಲಿಕೆಯ ತಂತ್ರಗಳನ್ನು ಸೇರಿಸಲು ಅವರಿಗೆ ಕಲಿಸಬಹುದು. ಇದು ವಿದ್ಯಾರ್ಥಿಗಳು ಆನ್ ಲೈನ್ ತರಗತಿಗಳಲ್ಲಿ ಆತ್ಮವಿಶ್ವಾಸದಿಂದಿರಲು ಸಹಾಯ ಮಾಡುತ್ತದೆ ಮತ್ತು ನಿಷ್ಕ್ರಿಯವಾಗಿರುವ ಬದಲು ತಮ್ಮ ಕ್ಯಾಮೆರಾಗಳನ್ನು ಆನ್ ಮಾಡುವ ಮೂಲಕ ಭಾಗವಹಿಸಲು ನೆರವಾಗುತ್ತದೆ.